ಸೋಮವಾರ, ಜನವರಿ 25, 2010

ಆಹಾ ಪ್ರೇಮ ಎಷ್ಟೋಂದು ಸುಂದರ. ನಲಿಯುತ, ಕುಣಿಯುತ, ಕನಸುಗಳಲ್ಲಿ ಕನವರಿಸುತ ಕಳೆಯುವ ಈ ಯೌವನದ ದಿನಗಳಲ್ಲಿ, ಒಲುಮೆಯ ದೋಣಿಯಲ್ಲಿ ಬಾಳ ಸಂಗಾತಿಯಾಗಿ ಪ್ರೀತಿಸುವ ಜೀವವೊಂದು ಜೊತೆ ಇದ್ದರೆ............................
ಹಾಗೇಯೇ ಪ್ರೀತಿಸುವ ಜೀವಗಳೆರಡು ಅಗಲುವ ಕ್ಷಣಗಳು ಅನಿವಾರ್ಯವಾದಾಗ ಆ ಜೀವಗಳಿಗೆಷ್ಟು ನೋವು , ಹೃದಯಗಳ ಬಡಿತವೇ ನಿಂತತೇ. ಆ ಅಗಲುವಿಕೆಯ ನೋವಿನಲ್ಲೂ ಏನೋ ಒಂದು ಆಸೆ ಮೂಡುತ್ತದೆ. ಆ ಆಸೆಯ ದಡವನ್ನು ಸೇರುವೆನೆ ಎಂಬ ಪ್ರಶ್ನೆಗೆ ಬಹುಶ: ಉತ್ತರ............

ಪ್ರೇಮಿಯ ಆಸೆ

ಬರದಿರಲಿ ಬರದಿರಲಿ
ಸಾವೆನಗೆ ಬರದಿರಲಿ
ಪ್ರೀತಿಯ ಕನಸು ಕರಗದೇ ಇರಲಿ
ಒಲುಮೆಯ ದೋಣಿ ಸಾಗುತಲಿರಲಿ
ಬರದಿರಲಿ.... ಬರದಿರಲಿ...

ನಿನ್ನನು ನಾನು ಅಗಲಿರಲಾರೆ
ನಿನ್ನನು ಮರೆತು ಬದುಕಿರಲಾರೆ
ಹೃದಯದಿ ನಿನ್ನ ಬಚ್ಚಿಟ್ಟಿರುವೆ
ನಿನ್ನನು ನಾ ಹೊರದೂಡಲಾರೆ
ಬರದಿರಲಿ..... ಬರದಿರಲಿ.....

ಬರೆದಿಹ ಬ್ರಹ್ಮ ಹಣೆಬರಹ
ನಡೆದಿದೆ ಬದುಕಲಿ ಸಾವಿನ ಕಲಹ
ಬಯಸುವೆ ಇರಲು ನಿನ್ನ ಸನಿಹ
ಸೇರುವೆನೆ ನಾ ಆಸೆಯ ದಡವ?
ಬರದಿರಲಿ..... ಬರದಿರಲಿ......
ಈ ಯೌವನವೇ ಹಾಗೇ ನಮಗೆ ಬೇಡವೆಂದರೂ ಏಕಾಂಗಿಯಾಗಿರುವ ನಮ್ಮನ್ನು ಪ್ರೇಮದಲ್ಲಿ ಸಿಲುಕಿಸಿ ಕಾಣದ ಪ್ರೀತಿಗೆ ಹಾತೊರೆಯುವಂತೆ ಮಾಡುತ್ತದೆ. ಹಾಗೇ ಆ ಪ್ರೀತಿ ಹತ್ತಿರ ಆಗುತ್ತಿದ್ದಂತೆ , ಯೌವನದ ಬೇಗೆ ಮತ್ತಷ್ಟು ಸುಡುತ್ತಿದ್ದಂತೆ , ಪ್ರೀತಿಸುವ ಜೀವಗಳೆರಡು ಬಿಸಿ ಅಪ್ಪುಗೆಗೆ ಅಣಿಯಾಗಿ ವಿರಹದ ಬೇಗೆಯನ್ನು ಚುಂಬನದ ಹೊಳೆಯಲ್ಲಿ ಮಿಂದು ಶಾಂತವಾಗಿಸುತ್ತವೆ. ಈ ಪ್ರೇಮಾಗ್ನಿಯಲ್ಲಿ ನೀವೂ ಜಿಗಿಯ ಬಯಸುವಿರಾ?


ಪ್ರೇಮಾಗ್ನಿ

ಚಂದಿರನ ಬೆಳದಿಂಗಳಲಿ
ತಂಪನೆಯ ಗಾಳಿಯಲಿ
ಮನವಿಹುದು ನಿನ್ನ ಯೋಚನೆಯಲಿ
ಬಳಲುತಿದೆ ವಿರಹದಲಿ

ಪ್ರೀತಿಯ ಹಾದಿಯಲಿ
ಈ ಏಕಾಂಗಿತನದಲಿ
ನಡುಗುತಿದೆ ತನು-ಮನವು.
ಬಿಸಿಅಪ್ಪುಗೆಯ ನೀಡಿ
ತೋರು ನಿನ್ನ ಒಲವು.

ನಿನ್ನ ಕಂಗಳ ಕಾಂತಿಯಲಿ
ಆ ಚುಂಬನದ ಜೇನು ಹೊಳೆಯಲಿ
ತೇಲಿ ತೇಲಿ ಆನಂದದ ದಡವ ಸೇರಿಸು
ನನ್ನೊಳಗಿನ ಪ್ರೇಮಾಗ್ನಿಯನು ಶಾಂತಗೊಳಿಸು.