ಮಂಗಳವಾರ, ಜನವರಿ 11, 2011

ಪುನರ್ಜನ್ಮ



ನನ್ನ ಚಿತ್ತದೊಳು
ಸದಾ ನಿನ್ನದೇ ಚಿತ್ರ

ನಾ ಸತ್ತಾಗ ನನ್ನ ಚಿತೆಗೂ
ನಿನ್ನದೇ ಚಿಂತೆ

ಏಕೆ?

ನನ್ನ ಹೃದಯದ ಬಡಿತದ ನಾದ

ನಿನ್ನ ಮೌನ ಭಾವಕ್ಕೆ ತಿಳಿಯಲಿಲ್ಲವೇ?



ನಿನ್ನನ್ನು ಚಿತ್ತದಲ್ಲಿ
ಚಿತ್ರಿಸಿ ಇಟ್ಟಿದ್ದು
ನನ್ನ ಕಣ್ಮುಂದೆ ಬರ್ತೀಯಾ ಎಂದು

ಆದರೆ ನೀ ಕೊನೆಗೂ ಮೌನಿಯಾಗಿ ಕುಳಿತೆ

ಚಿತ್ತದಲ್ಲಿ ಚಿತ್ರದಲ್ಲಿ........


ಆದರೆ,
ನಾ ಮತ್ತೇ ಬರುವೆ ನಿನಗಾಗಿ

ಪುನರ್ಜನ್ಮ ತಳೆದು................

ನಿನ್ನ ನೆನಪಿನಲ್ಲಿ


ಗೆಳತಿ,
ನೀನು ನನ್ನವಳಾಗಲಿಲ್ಲಾ
ಎಂಬ ನೋವಿಲ್ಲಾ,

ಆದರೆ,
ನನ್ನ ಬಿಟ್ಟು ನಿನೋಬ್ಬಳೇ
ಚಿರನಿದ್ರೆಗೆ ಜಾರಿದೆಯೆಲ್ಲಾ
ಅದೇ ನನಗೆ ಬೇಜಾರು,

ಏಕೆ,
ಸಾವಿನ ನೋವಿನಲ್ಲೂ
ಒಂದಾಗೋಣ ಅಂದದ್ದು
ಮರೆತೆಯಾ?

ಗೆಳತಿ,
ದಿನಗಳ ನೆನೆಯುತ್ತ
ನಿನ್ನ ನೆನಪುಗಳಲ್ಲೇ ಬದುಕುತ್ತ
ದಿನಗಳ ಕಳೆಯುತಿರುವೆ...............

ನನ್ನ ಕನಸು

ನನ್ನ ಕನಸು

ಬಸ್ ಸ್ಟಾಪಿನಲ್ಲಿ ನೀ ಬಿದ್ದೆ
ನನ್ನ ಕಣ್ಣಿಗೆ,
ನಾ ಹತ್ತಿದೆ ನೀ ಹತ್ತಿದ ಬಸ್ಸಿಗೆ
ಬಸ್ಸಲ್ಲಿ ಕೂಡಲು ಜಾಗವಿಲ್ಲದೇ
ನಾವಿಬ್ಬರೂ ನಿಂತೆವು ಒತ್ತೊಟ್ಟಿಗೆ.

ಬಸ್ಸಿನ ವೇಗ ಹೆಚ್ಚಾಯಿತು
ನಮ್ಮಿಬ್ಬರ ದೇಹಕ್ಕೆ ಮಾತಾಯಿತು
ನಿನ್ನ ಗಮನ ನನ್ನತ್ತ ಹರಿಯಿತು
ನಿನ್ನ ಕಣ್ಣುಗಳ ಮಿಂಚು ನನ್ನನ್ನು ಸೆಳೆಯಿತು.

ಮೂಕಾದವು ಮನಸುಗಳು
ಮಾತಾಡಿದವು ಕಣ್ಣುಗಳು
ನನಗಾಗ ಅನ್ನಿಸಿತು,
ನಾವಾಗಬಹುದಲ್ಲವೇ ಯುವ ಪ್ರೇಮಿಗಳು.

ಬಸ್ಸಿನಿಂದ ನೀ ಇಳಿದೆ
ತಿರುಗಿ ಹೂ ನಗೆಯ ಬೀರಿದೆ
ಸಂತೋಷದಿಂದ ನನ್ನ ಎರಡೂ ಕೈ ಎತ್ತಿದೆ
ಮಂಚದಿಂದ ನಾ ನೆಲಕ್ಕುರುಳಿದೆ.

ಗಾಬರಿಯಿಂದ ನಾ ಕಣ್ತೆರೆಯಲು
ನಡೆದದ್ದೆಲ್ಲವೂ ಕನಸಾಗಲು.............

ನಿಮ್ಮ ಪವನ.........

ಆದರ್ಶ ದಂಪತಿ

ಆದರ್ಶ ದಂಪತಿ..

ಎಲ್ಲೋ ಹುಟ್ಟಿ ಎಲ್ಲೋ ಬೆಳೆದ
ಒಂದು ಗಂಡು ಒಂದು ಹೆಣ್ಣು
ಆಗುವರಿಬ್ಬರೂ ಒಂದು ಸಂಸಾರದ
ಎರೆಡು ಕಣ್ಣು.

ನಾ ಹೆಚ್ಚು ತಾ ಹೆಚ್ಚೆಂದ
ವ್ಯತ್ಯಾಸವಿರಕೂಡದ ಅವರಲ್ಲಿ
ಈರ್ವರೂ ಸಮಾನರೆಂದು
ಸುಖ-ದು:ಖ ಹಂಚಿಕೊಳ್ಳಬೇಕು
ತಮ್ಮ ಜೀವನದಲ್ಲಿ.

ಗತಕಾಲದ ನೋವ ಮರೆತು
ಭವಿಷ್ಯದ ಸುಖವನರಿತು
ಬಾಳಬೇಕು ಸತಿ-ಪತಿ ಗಳು,
ಅವರ ಜೀವನದಲ್ಲಿರಬೇಕು
ದಿಟ್ಟ ಹೆಜ್ಜೆಗಳು.

ಅನುಮಾನವೆಂಬ ನರಕವ
ಸೃಷ್ಟಿಸಬಾರದು,
ವಿರಸವೆಂಬ ವಿಷವರ್ತುಲದಲಿ
ಸಿಲುಕಿ ನೋಯಬಾರದು,

ಆದರ್ಶ ದಂಪತಿಗಳಾಗಿ
ಜೀವನ ನಡೆಸಬೇಕು,
ಮುಂಬರುವ ದಂಪತಿಗಳಿಗೆ
ಮಾದರಿಯಾಗಬೇಕು..........

ನಿಮ್ಮ ಪವನ...............

ಶುಕ್ರವಾರ, ನವೆಂಬರ್ 12, 2010

ಕನ್ನಡ ಗಜಲ್ಗಳು


ಗಜಲ್ ಗಳು ಕನ್ನಡದಲ್ಲಿಯೂ ಇಷ್ಟೊಂದು ಭಾವಪೂರಿತವಾಗಿ ಇರುತ್ತವೆ ಅನ್ನುವದು ನನಗೆ ಗೊತ್ತೇ ಇರಲಿಲ್ಲ. ಡಾ|| ರಾಜೇಂದ್ರ ಎಸ್. ಗಡಾದ ಅವರೇ ಬರೆದ ಈ ಗಜಲ್ ನಿಮಗಾಗಿ.... ಅವರನ್ನು ಪ್ರೋತ್ಸಾಹಿಸೋಣ,

ಪ್ರೀತಿಗೆ ಬೆಂಕಿ ಬಿದ್ದ ಮೇಲೆ ದಿಢೀರ್ ಬಿರುಗಾಳಿ ಬೀಸಿತು.
ಅರಳುತ್ತಿದ್ದ ಆಸೆ ಕಮರಿತು ಮನಸು ಮುದುಡಿತು.

ಹೂವುಗಳನು ಮಟ್ಟಲೋದೆ ಮುಖವ ಮುಚ್ಚಿಕೊಂಡವು
ದುಂಬಿಗಳನು ಮಾತನಾಡಿಸಿದೆ ಮೌನದಿ ಎದ್ದು ಹೋದವು.

ಅತ್ತ ನೋಡಿದೆ ಹಸಿರು ಹುಲ್ಲಿನ ಮೇಲಿನ ರಂಗು ಮಾಯವಾಯಿತು
ಇತ್ತ ಹೊರಳಿದೆ ಪುಟಿದೆದ್ದ ಕುಣಿವ ಕಾರಂಜಿ ನಿಂತು ಬಿಟ್ಟಿತು.

ಮಾಮರದ ಕೆಳಗೆ ಹೋದೆ ಕೋಗಿಲೆಯ ದನಿ ಸುಳಿಯಲಿಲ್ಲ
ಗೋಲಗುಮ್ಮಟದಿ ಕೂಗಿದೆ ಅವಳ ಹೆಸರು ಪ್ರತಿಧ್ವನಿಸಲಿಲ್ಲ.

ಮುತ್ತುಗಳನು ಪೋಣಿಸಲು ಕುಳಿತೆ ಕೈಜಾರಿ ಹೋದವಲ್ಲ
ಕನ್ನಡಿ ಮುಂದೆ ನಿಂತೆ ಸಿಡಿದು ಚೂರು ಚೂರಾಯಿತಲ್ಲ.

ಬಾನಲ್ಲಿ ಚಂದಿರನ ನೋಡಲೋದೆ ಮೋಡದಿ ಮರೆಯಾಯಿತು
ಕಲ್ಲು ಸಕ್ಕರೆಯ ಮೆಲ್ಲಲೋದೆ ಬಾಯೆಲ್ಲಾ ಕಹಿಯಾಯಿತು.

ಗುಪ್ತಗಾಮನಿಯಾದ ನನ್ನ ಪ್ರೀತಿ ಅವಳಿಗೆ ಹೋಳೆದೀತು ಹೇಗೆ?
ಬತ್ತಿಹೋಗುತ್ತಿರುವ ನನ್ನೊಲುಮೆ ಅರ್ಥವಾದೀತು ಹೇಗೆ?

ನಿಜವಾಗಲೂ ಎಷ್ಟೋಂದು ಭಾವಪೂರ್ಣದಿಂದ ಕೂಡಿದೆ.............
ಹಾಗೇ ನೋಡಿದರೆ ನನಗೆ ಈ ಸಾಲುಗಳು ಪ್ರಸಿದ್ಧ ಹಿಂದಿ ಚಿತ್ರ "ಮೇರಾ ನಾಮ ಜೋಕರ್" ನ ರಾಜ್ ಕಪೂರನನ್ನು ನೆನಪಿಸುತ್ತದೆ............... ನಿಮಗೆ..........?

ಮನದಾಳದ ಮಾತು


ಮನುಷ್ಯನ ಮನದಲ್ಲಿ ಎಷ್ಟೊಂದು ತೊಳಲಾಟಗಳು ಇರುತ್ತವಲ್ಲವೆ. ಮನುಷ್ಯ ಪ್ರೀತಿ ಮಾಡದಿದ್ದರೂ ಸಹ ಪ್ರೀತಿ ಮಾಡಿದ ಮೇಲೆ ಗೆಳತಿಗೆ/ಗೆಳೆಯನಿಗೆ ಅರ್ಥವಾಗದಿದ್ದರೆ ನಂತರ ಅವಳ/ಅವನ ಪರಿಸ್ಥಿತಿಯನ್ನು ಒಮ್ಮೆ ಹಾಗೇ ಊಹೆ ಮಾಡಿಕೊಳ್ಳಿ ಸಾಕು.. ಹೀಗೆ ನಾನು ನವೋದಯ ಸಂಚಿಕೆಯನ್ನು(ಗದಗ ಜಿಲ್ಲೆಯ ಸ್ಥಳೀಯ ಪತ್ರಿಕೆಯ ದೀಪಾವಳಿ ವಿಶೇಷಾಂಕ)ಓದತ್ತಿರುವಾಗ ಗದಗದವರೇ ಆದ ಡಾ|| ರಾಜೇಂದ್ರ ಎಸ್.ಗಡಾದ ಅವರ ಈ ಹನಿಗವನ್ನು ಓದಿದೆ....

ಒಳಗೊಳಗೆ ಅತ್ತು
ಒಮ್ಮೆಲೆ ಸತ್ತು
ಬೀದಿ ಹೆಣವಾದ
ಕನಸುಗಳ
ಶವಸಂಸ್ಕಾರಕ್ಕೆ
ಯಾರು ಬರುವರು
ಹೇಳು ಗೆಳತಿ?,,,,

ನಿಜವಾಗಲೂ ಎಂಥಹ ಅನುಭವ.....

ಮಂಗಳವಾರ, ಅಕ್ಟೋಬರ್ 19, 2010

ಸ್ವಲ್ಪ ನಗಿರಿ

ನಗುವೇ ಜೀವನ

ನಗು.. ನೀ ನಗು... ಕಿರು ನಗೆ ನಗು........ ಎಲ್ಲರೂ ಈ ಹಾಡನ್ನು ಕೇಳಿರಬೇಕು.
ಇಂದಿನ ಒತ್ತಡಗಳಿಂದ ಕೂಡಿದ ಜೀವನದಲ್ಲಿ ನಾವೆಲ್ಲರೂ ನಗುವುದನ್ನೇ ಮರೆತು ಬಿಟ್ಟಿದ್ದೇವೆ. ಈಗ ಜನರನ್ನು ನಗಿಸುವದನ್ನೇ ಒಂದು ಕೆಲಸವನ್ನಾಗಿಸಿಕೊಂಡು ಎಷ್ಟೋ ಸಂಘ ಸಂಸ್ಥೆಗಳು, ಶಿಬಿರಗಳು, ಹಾಸ್ಯ ಸಂಜೆಯಂಥಹ ಕಾರ್ಯಕ್ರಮಗಳು ನಡೆಯುತ್ತಿವೆ. ನಗುವು ಮನುಷ್ಯನ ಜೀವನದಲ್ಲಿ ನವೋಲ್ಲಾಸವನ್ನು, ಮುಖದಲ್ಲಿ ಮಂದಹಾಸವನ್ನು ತಂದು ಮನುಷ್ಯನ ಬದುಕಿಗೆ ಪರಿಪೂರ್ಣತೆಯನ್ನು ತರುತ್ತದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಆದ್ದರಿಂದ, ಮನುಷ್ಯನು ಜೀವನದಲ್ಲಿ ನಗುವಿನ ವಾತಾವರಣ ಕೂಡಿಬಂದಾಗ ಮನಬಿಚ್ಚಿ ನಗಬೇಕು. ಇದರಿಂದ, ಮನವು ಹಗುರಾಗಿ ನವಚೈತನ್ಯವನ್ನು ತುಂಬಿಸುತ್ತದೆ.


ಆದ್ದರಿಂದ, ನಾವು ನೀವೆಲ್ಲರೂ ನಗುನಗುತ ಜೀವನವನ್ನು ಕಳೆಯೋಣ.

ನಿನ್ನ ಪ್ರೀತಿಯ ಬೆಳಕು

ಮನುಷ್ಯನ ಜೀವನದಲ್ಲಿ ನಿಜವಾಗಲೂ ಎಲ್ಲಕ್ಕಿಂತ ಮಿಗಿಲಾದದ್ದು ಯಾವುದು?

" ಅನುಭವ" ಅಲ್ಲವೇ.....

ಈ ಅನುಭವ ಪ್ರೀತಿಯದಾಗಿದ್ದರೆ ಆಹಾ;;; ಜೀವನ ಎಷ್ಟೊಂದು ಸುಮಧುರ , ಎಷ್ಟೋಂದು ಉಲ್ಲಾಸದಿಂದ ಕೂಡಿರುತ್ತದೆ. ಹೀಗೆ ಒಬ್ಬ ...... ಪ್ರೀತಿಯನ್ನು ಮಾಡದೇ ಪ್ರೀತಿ ಹೇಗೆ ಇರಬಹುದು ಅನ್ನುವದನ್ನು ಅನುಭವಿಸಿದ. ಆಗ ಅವನ ಮನದಲ್ಲಿ ಮೂಡಿಬಂದ ಭಾವನೆಗಳು..... ಹೇಗಿರುತ್ತವೆ ಅನ್ನುವದನ್ನು ಬರೆದಿಟ್ಟ.



ನಾನಿದ್ದೆ ನನ್ನ ಪ್ರಪಂಚದಲ್ಲಿ ಏಕಾಂಗಿಯಾಗಿ
ನೀ ಬಂದೆ ನನ್ನ ಜೀವನದಲ್ಲಿ ಪ್ರೀತಿಯಾಗಿ
ನನ್ನ ಮನದಲ್ಲಿ ಪ್ರೀತಿಯೆಂಬ ದೀಪವನ್ನು ಹಚ್ಚಿ...
ನನ್ನ ಜೀವನದಲ್ಲಿ ನೀ ತಂದೆ ಬೆಳಕನ್ನು
ನೀನಿಲ್ಲದಿದ್ದರೆ ಈ ಜೀವನವೇ ಅಂಧಕಾರ ನನಗಿನ್ನು.

ನೀ ತಂದ ಈ ಪ್ರೀತಿಯ ಬೆಳಕು ಆರದಿರಲಿ
ನಮ್ಮ ಮನಸುಗಳು ಎಂದೆಂದಿಗೂ ಅಗಲದಿರಲಿ
ಅಗಲಿ ನಮ್ಮ ಜೀವನ ಅಂಧಕಾರವಾಗದಿರಲಿ,
ನಮ್ಮ ಪ್ರೀತಿಯ ಮೇಲೆ ನಮಗೆ ನಂಬಿಕೆ ಇರಲಿ
ನೀ ತಂದ ಪ್ರೀತಿಯ ಬೆಳಕು
ಸದಾ ನನ್ನ ಜೀವನದಲ್ಲಿ ಬೆಳಗುತಿರಲಿ.

ಶನಿವಾರ, ಜೂನ್ 26, 2010

ಪ್ರೀತಿಗೆ ಶರಣು

ಹೌದು ಮನುಷ್ಯನ ಜೀವನದಲ್ಲಿ ಪ್ರೀತಿ ಅನ್ನುವದು ನಿಜಕ್ಕೂ ಒಂದು ಅದ್ಭುತ ಅನುಭವ, ಹೀಗೆ ಒಂದು ದಿನ ಜೀವನ ಮತ್ತು ಪ್ರೀತಿ ನದಿಯ ಸೇತುವೆ ಮೇಲೆ ಹೋಗುತ್ತಿದ್ದಾಗ, ಪ್ರೀತಿ ಜಾರಿ ಬಿದ್ದಿತು ಅದನ್ನು ನೋಡಿ ಜೀವನ ನೀರಿನಲ್ಲಿ ಜಿಗಿಯಿತು. ಅಂದರೆ, ಬದುಕಿನಲ್ಲಿ ಪ್ರೀತಿ ಇಲ್ಲದಿದ್ದಾಗ ಜೀವನಕ್ಕೆ ಅರ್ಥವೇ ಇರುವದಿಲ್ಲ. ಅದಕ್ಕಾಗಿ ಪ್ರತಿಯೊಬ್ಬರು ಪ್ರೀತಿಗೆ ಶರಣಾಗಲೇ ಬೇಕು.
ಈ ಪ್ರೀತಿ ಅನ್ನುವದು ಒಂಥರಾ ಜ್ವರ, ವೈದ್ಯನ ಸಲಹೆ ಅಗತ್ಯವಿಲ್ಲ. ನಮ್ಮ ಭಾವನೆಗಳನ್ನ ಹೇಗಾದರೂ ವ್ಯಕ್ತ ಪಡಿಸಬೇಕು ಆಗಲೇ ಆ ಜ್ವರ ಇಳಿಯುವದು. ಹೀಗೆ ಪ್ರೀತಿ ಅನ್ನುವದು ನಾನಾ ತರಹದ ಭಾವನೆಗಳನ್ನು ಹೊರಚೆಲ್ಲುತ್ತದೆ. ಅದು ವಿರಹವಾದರೂ ಸಹಿ ಸರಸವಾದರೂ ಸಹಿ.


ನನ್ನಕ್ಷಿ ಪಟಲದಲ್ಲಿ ಹಿಡಿಯಬೇಕೆಂದಿರುವೆ ನಿನ್ನ ಭಾವಚಿತ್ರ
ಒಂದು ಸಾರಿಯಾದರೂ ಬರಬಾರದೇ ನನ್ನ ಹೃದಯದ ಹತ್ತಿರ.

ಕಲ್ಪನೆಯಲ್ಲಿ ನಿನ್ನನ್ನು ನೆನೆದಾಗ
ನನಗಾವುದು ರೋಮಾಂಚನ
ಇನ್ನು ನೀ ಕಣ್ಮುಂದೆ ಬಂದು ನಿಂತರೆ
ಅಬ್ಬಾ.... ಊಹಿಸಲಾರೆ ನಾ ಆ ಕ್ಷಣ


ಮನದಲ್ಲಿ ಮೂಡಿದಾಗ ನಿನ್ನ ಚಿತ್ರ
ಆಗುವದು ನನಗೇನೋ ವಿಚಿತ್ರ
ಕಣ್ಮುಂದೆ ನೀ ಬಂದು ನಿಂತರೆ
ನಿಂತಲ್ಲೇ ನಾ ಕರಗಿ ಹೋಗುವೆ.

ಹೀಗೆ ಎರಡು ಹೃದಯಗಳ ನಡುವೆ ಪ್ರೀತಿ ಅಂಕುರಿಸಿದಾಗ ಮನಸ್ಸು ಎಷ್ಟು ಸಂತಸ ಪಡುತ್ತದೋ, ಮಾಡದೇ ಇದ್ದರೂ ಅದನ್ನು ಭಾವನೆಗಳಿಂದ ಅನುಭವಿಸಿದಾಗಲೂ ಅಷ್ಟೇ ಮನಸ್ಸು ಸಡಗರ ಪಡುತ್ತದೆ. ಅದಕ್ಕೆ ಪ್ರೀತಿಯನ್ನು ಅನುಭವಿಸಿ ಅನುಸರಿಸಬೇಕಲ್ಲವೇ?

ಹೀಗೇ, ಒಬ್ಬ ಪ್ರೇಮಿಯ ಪ್ರೀತಿ ವಿರಹವಾಗಿ ಬದಲಾದಾಗ, ಪ್ರೇಮಿಯ ಮನಸ್ಸು ಹೇಗೆ ತೊಳಲಾಡುತ್ತದೆ,

ಕುಳಿತಲ್ಲೆ ಕುಳಿತಿದ್ದೆ
ನಾ ಕನಸ ಕಂಡೆ
ಕನಸಲ್ಲಿ ನೀ ಬಂದೆ
ಬಲು ಮೋಹಗೊಂಡೆ

ಆ ಮೋಹ ಅತೀಯಾಗಿ
ನಾ ನಿನ್ನ ಸೆರೆಯಾಗಿ
ನನನ್ನೇ ಮರೆತೆ
ನಾ ನಿನಗೆ ಸೋತೆ.

ವಿರಹಾಗ್ನಿಯಲಿ ನಾನಿರಲು
ನೀ ದೂರವಿರಲು
ಅದರಲ್ಲಿ ನಾ ಬೆಂದು ಹೋದೆ
ನೀ ಬಳಿ ಬರಲಾರದೆ. ಹೀಗೆ ಪ್ರೀತಿಯ ಸುಳಿಯಲ್ಲಿ ಸಿಗದಿದ್ದರೂ, ಅದನ್ನ ಅನುಭವಿಸುವ ಅಗ್ನಿಯಲ್ಲೆ ಬೆಂದು ಹೋಗುತ್ತಾನೆ.

ಹರೆಯದ ಬಯಕೆಯೇ ಹೀಗೆ, ಏನನ್ನು ನೋಡಿದರೂ, ಕನಸೂ ಕಂಡರೂ, ಒಂದು ಹೆಣ್ಣಿನ/ಗಂಡಿನ ಚಿತ್ರ ನೋಡಿದ ಹಾಗೆ ಭಾಸವಾಗುತ್ತದೆ. ದೇಹ ಪ್ರಕೃತಿಯು ವರವಾಗಿ ನೀಡಿದ ಅದ್ಭುತ ಸುಖವನ್ನು ಅನುಭವಿಸಲು ಹಾತೊರೆಯುತ್ತದೆ.

ಏಕೆ ಹೀಗಾಯಿತು ನನಗೆ?
ನನ್ನ ಕನಸುಗಳು ಸರೆದಿವೆ
ತೆರೆಮರೆಗೆ
ಎಲ್ಲಿ ನೋಡಿದರಲ್ಲಿ ಮಸಕು ಮಸಕು ಚಿತ್ರ
ಬಯಸುತಿದೆ ಬರಲು ನನ್ನ ಹತ್ತಿರ.
ಹರೆಯದ ಹೊಸ್ತಿಲಲ್ಲಿ ನಿಂತಿರುವೆ
ಆಲಿಂಗನ ಸುಖವ ಈ ದೇಹ ಬಯಸುತಿದೆ
ನೀ ನನ್ನ ಸ್ವೀಕರಿಸು ಅನ್ನುತಿದೆ
ಮಿಲನ ಮಹೋತ್ಸವಕ್ಕೆ ಕೈಬೀಸಿ ಕರೆಯುತಿದೆ
ನಾ ಕಂಡ ಆ ಮಸಕು ಚಿತ್ರ
ಸ್ಪಷ್ಟವಾಗಿ ಕಾಣಿಸುತಿದೆ
ನಾ ಕರೆಯದೆ ಬಂದ ಆ
ರೂಪರಾಶಿಗೆ ಮನಸೋತಿದೆ.
ಓ ಮನೋಹರಿ,
ಸುಖದ ಉತ್ತುಂಗಕ್ಕೆ ನೀ ಸೆಳೆದೆ
ನಾ ನಿನ್ನ ಉಸಿರ ಉಸಿರಾದೆ
ಸ್ವರ್ಗಕ್ಕೆ ಕಿಚ್ಚು ಹಚ್ಹ್ಚಿದೆ
ನೀ ನನ್ನ ಹರೆಯದ ಬಯಕೆಯ ತೀರಿಸಿದೆ.

ಸೋಮವಾರ, ಜನವರಿ 25, 2010

ಆಹಾ ಪ್ರೇಮ ಎಷ್ಟೋಂದು ಸುಂದರ. ನಲಿಯುತ, ಕುಣಿಯುತ, ಕನಸುಗಳಲ್ಲಿ ಕನವರಿಸುತ ಕಳೆಯುವ ಈ ಯೌವನದ ದಿನಗಳಲ್ಲಿ, ಒಲುಮೆಯ ದೋಣಿಯಲ್ಲಿ ಬಾಳ ಸಂಗಾತಿಯಾಗಿ ಪ್ರೀತಿಸುವ ಜೀವವೊಂದು ಜೊತೆ ಇದ್ದರೆ............................
ಹಾಗೇಯೇ ಪ್ರೀತಿಸುವ ಜೀವಗಳೆರಡು ಅಗಲುವ ಕ್ಷಣಗಳು ಅನಿವಾರ್ಯವಾದಾಗ ಆ ಜೀವಗಳಿಗೆಷ್ಟು ನೋವು , ಹೃದಯಗಳ ಬಡಿತವೇ ನಿಂತತೇ. ಆ ಅಗಲುವಿಕೆಯ ನೋವಿನಲ್ಲೂ ಏನೋ ಒಂದು ಆಸೆ ಮೂಡುತ್ತದೆ. ಆ ಆಸೆಯ ದಡವನ್ನು ಸೇರುವೆನೆ ಎಂಬ ಪ್ರಶ್ನೆಗೆ ಬಹುಶ: ಉತ್ತರ............

ಪ್ರೇಮಿಯ ಆಸೆ

ಬರದಿರಲಿ ಬರದಿರಲಿ
ಸಾವೆನಗೆ ಬರದಿರಲಿ
ಪ್ರೀತಿಯ ಕನಸು ಕರಗದೇ ಇರಲಿ
ಒಲುಮೆಯ ದೋಣಿ ಸಾಗುತಲಿರಲಿ
ಬರದಿರಲಿ.... ಬರದಿರಲಿ...

ನಿನ್ನನು ನಾನು ಅಗಲಿರಲಾರೆ
ನಿನ್ನನು ಮರೆತು ಬದುಕಿರಲಾರೆ
ಹೃದಯದಿ ನಿನ್ನ ಬಚ್ಚಿಟ್ಟಿರುವೆ
ನಿನ್ನನು ನಾ ಹೊರದೂಡಲಾರೆ
ಬರದಿರಲಿ..... ಬರದಿರಲಿ.....

ಬರೆದಿಹ ಬ್ರಹ್ಮ ಹಣೆಬರಹ
ನಡೆದಿದೆ ಬದುಕಲಿ ಸಾವಿನ ಕಲಹ
ಬಯಸುವೆ ಇರಲು ನಿನ್ನ ಸನಿಹ
ಸೇರುವೆನೆ ನಾ ಆಸೆಯ ದಡವ?
ಬರದಿರಲಿ..... ಬರದಿರಲಿ......
ಈ ಯೌವನವೇ ಹಾಗೇ ನಮಗೆ ಬೇಡವೆಂದರೂ ಏಕಾಂಗಿಯಾಗಿರುವ ನಮ್ಮನ್ನು ಪ್ರೇಮದಲ್ಲಿ ಸಿಲುಕಿಸಿ ಕಾಣದ ಪ್ರೀತಿಗೆ ಹಾತೊರೆಯುವಂತೆ ಮಾಡುತ್ತದೆ. ಹಾಗೇ ಆ ಪ್ರೀತಿ ಹತ್ತಿರ ಆಗುತ್ತಿದ್ದಂತೆ , ಯೌವನದ ಬೇಗೆ ಮತ್ತಷ್ಟು ಸುಡುತ್ತಿದ್ದಂತೆ , ಪ್ರೀತಿಸುವ ಜೀವಗಳೆರಡು ಬಿಸಿ ಅಪ್ಪುಗೆಗೆ ಅಣಿಯಾಗಿ ವಿರಹದ ಬೇಗೆಯನ್ನು ಚುಂಬನದ ಹೊಳೆಯಲ್ಲಿ ಮಿಂದು ಶಾಂತವಾಗಿಸುತ್ತವೆ. ಈ ಪ್ರೇಮಾಗ್ನಿಯಲ್ಲಿ ನೀವೂ ಜಿಗಿಯ ಬಯಸುವಿರಾ?


ಪ್ರೇಮಾಗ್ನಿ

ಚಂದಿರನ ಬೆಳದಿಂಗಳಲಿ
ತಂಪನೆಯ ಗಾಳಿಯಲಿ
ಮನವಿಹುದು ನಿನ್ನ ಯೋಚನೆಯಲಿ
ಬಳಲುತಿದೆ ವಿರಹದಲಿ

ಪ್ರೀತಿಯ ಹಾದಿಯಲಿ
ಈ ಏಕಾಂಗಿತನದಲಿ
ನಡುಗುತಿದೆ ತನು-ಮನವು.
ಬಿಸಿಅಪ್ಪುಗೆಯ ನೀಡಿ
ತೋರು ನಿನ್ನ ಒಲವು.

ನಿನ್ನ ಕಂಗಳ ಕಾಂತಿಯಲಿ
ಆ ಚುಂಬನದ ಜೇನು ಹೊಳೆಯಲಿ
ತೇಲಿ ತೇಲಿ ಆನಂದದ ದಡವ ಸೇರಿಸು
ನನ್ನೊಳಗಿನ ಪ್ರೇಮಾಗ್ನಿಯನು ಶಾಂತಗೊಳಿಸು.




ಬುಧವಾರ, ಸೆಪ್ಟೆಂಬರ್ 2, 2009

ಹಾಗೆ ಸುಮ್ಮನೆ

ಬಿದಿರಿನ ನೆರಳಿನಲಿ

ನಲ್ಮೆಯ ಬಾಹು ಬಂಧನದಲಿ

ನನ್ನನ್ನು ನಾನು ಮರೆತೆ

ಅದು ಕಬ್ಬನ್ ಪಾರ್ಕನಲಿ .

ಬುಧವಾರ, ಆಗಸ್ಟ್ 12, 2009

ತಾಯಿ ಮಕ್ಕಳ ಜೀವನದಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುವಂಥವಳು, ಆ ತಾಯಿಗೆ ನನ್ನ ಕೆಲವು ಸಾಲುಗಳು.

ಅಮ್ಮ
ಅಮ್ಮ ಅಮ್ಮ ಅಮ್ಮ
ನಿನ್ನ ಮಡಿಲಸೇರಿ ಪಾವನನಾದೇನಮ್ಮ
ಜನ್ಮ ಜನ್ಮಕೂ ನಿನ್ನ ಮಡಿಲ ಬಯಸುವೇನಮ್ಮ
ದಯಮಾಡಿ ನನ್ನ ನೀ ತೊರೆಯಬೇಡಮ್ಮ.

ನಿನ್ನ ಮಮತೆಯ ಮನೆಯಲ್ಲಿ ಬೆಳೆದೆನಮ್ಮ
ನಿನ್ನಿಂದ ಮನೆಯು ನಂದಗೋಕುಲವಾಗಿತ್ತಮ್ಮ
ನೋವು-ನಲಿವಿನಲ್ಲಿ ಧೈರ್ಯದಿಂದ ನನ್ನ ಸಾಕಿದೆಯಮ್ಮ
ನನ್ನ ಬಿಟ್ಟು ಏಕೆ? ದೂರವಾದೆಯಮ್ಮ.

ನಿನ್ನ ನೆನಪು ನನ್ನನ್ನು ಕಾಡುತಿದೆಯೆಮ್ಮ
ನಿನ್ನನ್ನು ನಾನು ಹೇಗೆ ಮರೆಯಲಮ್ಮ
ಮಕ್ಕಳ ಜೀವನದಲ್ಲಿ ಎಲ್ಲರಿಗಿಂತ ಶ್ರೇಷ್ಠ ನೀನಮ್ಮ
ನೀನಿಲ್ಲದೇ ನನ್ನ ಬದುಕು ಮಿಥ್ಯವಾಗಿದೆಯಮ್ಮ
.

ಒಂದಿಷ್ಟು ಶಿರೋಲೇಖ ಕುರಿತು.

ಮನದ ಮೌನ
"ಮನದ ಮೌನ" ನಾನು ಏಕೆ? ಈ ಹೆಸರನ್ನು ಆಯ್ದುಕೊಂಡೆ ಎಂದು ಯೋಚಿಸಬಹುದು. ಅದಕ್ಕೆ ಕಾರಣ,
ಮೌನವು,
ಮ-ಮನುಷ್ಯನ
ನ-ನಡವಳಿಕೆಯ
ದ-ದರ್ಪಣ
ಮನುಷ್ಯನು ಸ್ವಭಾವತ: ಸಂಘ ಜೀವಿ, ನಾಲ್ಕು ಜನರ ಮಧ್ಯದಲ್ಲಿ ಮಾತನಾಡುವಾಗ ಕಸಿವಿಸಿಕೊಳ್ಳುವ ಸ್ವಭಾವದವರು ಇರುವುದುಂಟು. ಇದನ್ನು ನಾವು ಗಮನಿಸಿರದೇ ಇರುವುದಿಲ್ಲ. ಯಾವುದೇ ಒಬ್ಬ ವ್ಯಕ್ತಿ ಮನಸಿನಲ್ಲಿ ಇರುವ ತನ್ನ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ಹಿಂಜರಿದು ಮೌನಕ್ಕೆ ಶರಣಾಗುತ್ತಾನೆ. ಇದು ಅವನ ನಡುವಳಿಕೆಯಿಂದಲೇ ತಿಳಿಯುತ್ತದೆ.
ಇದು ಕೇವಲ, ಮಾತಿನಲ್ಲಷ್ಟೇ ಅಲ್ಲ, ವ್ಯಕ್ತಿ ತಾನು ಒಬ್ಬ ಉತ್ತಮ ಗಾಯಕ, ಕವಿತೆ ರಚನೆ ಮಾಡುವವ, ವಿದೂಷಕ ಇತ್ಯಾದಿ ಅಂತೆಲ್ಲ ಮತ್ತೋಬ್ಬರ ಮುಂದೆ ತೋರಿಸಿಕೊಳ್ಳದೇ, ಹೇಳಿಕೊಳ್ಳದೇ ಮೌನಕ್ಕೆ ಶರಣಾಗುತ್ತಾನೆ. ಅಂಥವರಲ್ಲಿ ನಾನೂ ಇರಬಹುದು ನೀವೂ ಇರಬಹುದು.
ಅದಕ್ಕಾಗಿ "ಮನದಲ್ಲಿ ಮೌನ" ವಾಗಿ ಕುಳಿತಿರುವ ವಿಷಯಗಳ ಕುರಿತು ಒಬ್ಬರಿಗೊಬ್ಬರು ಹಂಚಿಕೊಂಡು ಸಂತೋಷದಿಂದ ಇರುವುದಕ್ಕಾಗಿಯೇ ಈ

"ಮನದ ಮೌನ"
ಮನದ ಮೌನದ ಕುರಿತು ಮತ್ತಿಷ್ಟು ಕಾಯುತ್ತಿರಿ
ನಿಮ್ಮ ಪವನ.